Sunday, January 30, 2011

'ವಿದ್ಯಾರ್ಥಿ' ನಿಲಯಗಳ ಬವಣೆ 
ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ರವರು ರಾಜ್ಯದಲ್ಲಿ ಇನ್ನೂ 45 ಹೊಸ ವಿದ್ಯಾರ್ಥಿ ನಿಲಯವನ್ನು ಸ್ಥಾಪನೆ ಮಾಡಲಾಗುವುದೆಂದು ಹೇಳಿಕೆ ನೀಡಿರುವುದು ತುಂಬಾ ಸಂತಸದ ಸಂಗತಿ. ಆದರೆ ಈಗ ಪ್ರಸ್ತುತ ಇರುವಂತಹ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿಯು ಬಹಳ ಶೋಚನೀಯವಾಗಿದೆ. 
ಹೆಚ್ಚಿನ ಸರ್ಕಾರಿ ವಿದ್ಯಾರ್ಥಿ ನಿಲಯಗಳು ತಮ್ಮ ಮೂಲಭೂತ ಸೌಕರ್ಯಗಳಿಂದ  ವಂಚಿತವಾಗಿವೆ. ಕಳಪೆ ಗುಣಮಟ್ಟದ ಬೇಳೆ-ಕಾಳುಗಳು, ಅಕ್ಕಿಯಲ್ಲಿ ಹುಳ-ಹುಪ್ಪಟೆ, ವಿದ್ಯಾರ್ಥಿ ಕೊಠಡಿಗಳಲ್ಲಿ ತಿಗಣೆ ಕಾಟ ಅದರೊಂದಿಗೆ ಅವ್ಯವಸ್ಥೆಯಿಂದ ಕೂಡಿದ ಶೌಚಾಲಯಗಳು, ಅಸಮರ್ಪಕ ನೀರಿನ ವ್ಯವಸ್ಥೆ ಮುಂತಾದ ಸಮಸ್ಯೆಗಳಿಂದ ನರಳುತ್ತಿದೆ. ಇಷ್ಟೆಲ್ಲಾ ತೊಂದರೆಗಳಿದ್ದರೂ ಅದಕ್ಕೆ ಸೂಕ್ತ ವ್ಯವಸ್ತೆ ಕಲ್ಪಿಸುವುದರ ಬದಲಾಗಿ ಹೊಸ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಎಷ್ಟು ಸರಿ?
ಇದರ ಬದಲಾಗಿ ನೆನೆಗುದಿಗೆ ಬಿದ್ದಿರುವ ಅನೇಕ ವಿದ್ಯಾರ್ಥಿ ನಿಲಯಗಳ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಿದರೆ ಒಳಿತಲ್ಲವೇ..
                                                                     ನವೀನ್ ಉಪ್ಪಿನಂಗಡಿ      

Saturday, January 15, 2011

ಇಂತವರು ತಂಡಕ್ಕೆ ಬೇಕೇ?
ದೂಸ್ರಾ: ಅಷ್ಟೋ ಇಷ್ಟೋ ಬ್ಯಾಟಿಂಗ್ ಗೊತ್ತಿದ್ದ ನಮ್ಮ ಸೀನು ಈಗಿನ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಸ್ಥಾನದ ಬದಲಿ ಆಟಗಾರ ಮುರಳಿ ವಿಜಯ್ ಬಗ್ಗೆ ವಿಪರೀತವಾಗಿ ತಲೆ ಕೆಡಿಸಿಕೊಂಡಿದ್ದ. ತಮಿಳುನಾಡಿನಲ್ಲಿ ಹುಟ್ಟಿರುತ್ತಿದ್ದರೆ ತಾನು ಕೂಡ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದೆನೋ ಏನೋ ಅಂತ ಚಿಂತಾಕ್ರಾಂತನಾಗಿದ್ದ.


ಸೆಹ್ವಾಗ್, ಗಂಭೀರ್, ತೆಂಡೂಲ್ಕರ್ ಬಳಿಕ ಭಾರತೀಯ ಕ್ರಿಕೆಟ್ ಪಡೆಯ ಆರಂಭಿಕ ಸ್ಥಾನಕ್ಕೆ ಸೂಕ್ತವಾದ ಆಟಗಾರ ಯಾಕೋ ಸಿಗುವ ಸೂಚನೆಯಿಲ್ಲ. ಈ ಮೂವರಲ್ಲಿ ಯಾರೊಬ್ಬ ಗಾಯಗೊಂಡರೂ ಅವರ ಸ್ಥಾನದಲ್ಲಿ ಈ ಮುರಳಿ ವಿಜಯ್ ಹಾಜರ್.
ಆಯ್ಕೆ ಸಮಿತಿಯ ಅಧ್ಯಕ್ಷರು ತಮಿಳುನಾಡಿನವರಾದ ಕಾರಣ ಮುರಳಿ ವಿಜಯ್ ಗೆ, ಟೆಸ್ಟ್, ಏಕದಿನ ಮತ್ತು ಟಿ20 ತಂಡದಲ್ಲಿ ಕನಿಷ್ಠ ಪಕ್ಷ ಬದಲಿ ಆಟಗಾರನ ಸ್ಥಾನವಾದರು ಸಿಗುತ್ತಿದೆ.
ಕೇವಲ ಐ.ಪಿ.ಎಲ್ ನಲ್ಲಿ ಈತ ತೋರಿದ ಪರಾಕ್ರಮವನ್ನು ಮುಂದಿಟ್ಟುಕೊಂಡು ತಂಡದಲ್ಲಿ ಸ್ಥಾನ ಕಲ್ಪಿಸಲಾಗುತ್ತಿದೆ. ಕೋಟಿಯ ಆಸೆಗೆ ಪಟ್ಟು ಬಿದ್ದು ಕೇವಲ   ಐ.ಪಿ.ಎಲ್ ನಲ್ಲಿ ಮಾತ್ರ ತನ್ನ ಪೌರುಷ ತೋರುವ ಮುರಳಿ ವಿಜಯ್, ರಾಷ್ಟ್ರೀಯ ತಂಡದಲ್ಲಿ ಆಡುವಾಗ ಮಾತ್ರ ಮಂಕು ಕವಿದಂತಾಗುತ್ತಾರೆ.
ದೇಶೀಯ ಕ್ರಿಕೆಟಿನಲ್ಲಿ  ಸಾಧನೆ ತೋರ್ಪಡಿಸಿರುವ ಹಲವಾರು ಪ್ರತಿಭಾನ್ವಿತ ಆಟಗಾರರ ದಂಡೇ ಇರುವಾಗ, ಶ್ರೀಕಾಂತ್ ರವರು ತಮ್ಮವರಿಗೆ ಆದ್ಯತೆ ನೀಡುತ್ತ ಪ್ರತಿಭಾನ್ವಿತ ಆಟಗಾರರನ್ನು ಕಡೆಗಣಿಸಿ, ಮುರಳಿ ವಿಜಯ್ ನಂತಹ ಆಟಗಾರನಿಗೆ ಮಣೆ ಹಾಕುವುದು ಎಷ್ಟು ಸರಿ?
                                                                             ರಕ್ಷಿತ್.ಎಸ್                        

Thursday, January 6, 2011

             ಹಡೆದವ್ವ
ಬಂದೆ,ಬಂದೆ,ಬಂದೆ ನೀ ಎಲ್ಲಿಗೆ..?
ಕಲ್ಲು ಮುಳ್ಳಿನ ಹಾದಿ ಸವೆಸಿ
ನಿನ್ನ ಕರುಳ ಬಳ್ಳಿಯ ಅರಸಿ
                ಓಡೋಡಿ ಬಂದೆಯಾ

ಕಷ್ಟ ಕಾರ್ಪಣ್ಯವೆಲ್ಲವ ನುಂಗಿ 
ರಕ್ತ ಬೆವರ ಒಂದಾಗಿಸಿ 
ಕಣ್ಣೀರ ಕೋಡಿ ನೀ ಹರಿಸುತ್ತಾ
                 ಬಂದೆಯಾ..?

ಮಾಸಿಹೋದ ಸವಿನೆನಪುಗಳು 
ಕಳೆದುಹೋದ ಕನಸುಗಳು 
ನೆನೆ ನೆನೆದು ಕಣ್ಣೀರಿಡುವ ಕಂಗಳು 
                 ಹೊತ್ತು ತಂದೆಯಾ..?

ಅದೇ ನಿನ್ನ ಕೆದರಿದ ಕೇಶ 
ಅದೇ  ಬಡ ವೇಷ 
ಮುಖದಲ್ಲೇನೋ ಆವೇಶ 
                 ಸಾಧಿಸಲು ನಿನ್ನ ಇಚ್ಛೆಯ

ಅದೋ ನಿನ್ನ ಮಗ ಕಾದಿಹನು 
ಮಾತೃಪ್ರೇಮವ ಬಯಸುತ 
ತಾಯಿಯೆಂದಳು ಬಂದೆ ಕಂದಾ ಬಂದೆ 
                 ಆದರೇನು..?

ಆಕೆಯ ಕರುಳಬಳ್ಳಿ ಕಾದಿಹುದೆಲ್ಲಿ!!!
ಸುಂದರ ಹೂವಾಗಿ ಆ ಚಿತೆಯಲ್ಲಿ.....    

                               -ರಕ್ಷಿತ್.ಎಸ್









 

Wednesday, January 5, 2011

ನಮ್ಮದು ಪ್ರಸ್ತುತ ವಿಚಾರ ವಿಮರ್ಶೆಗಳ ಜೊತೆ "ಬುದ್ಧಿಯಿರುವ" ಜೀವಿಗಳನ್ನು ಎಚ್ಚರಿಸುವ  ಪ್ರಯತ್ನ....


ರಕ್ಷಿತ್.ಎಸ್      ನವೀನ್ ಉಪ್ಪಿನಂಗಡಿ 







ಪ್ರಸ್ತುತ ವಿಷಯಗಳ ಸುತ್ತ ಒಂದು ಕ್ರಾಂತಿಕಾರಿ ನಡೆ...